21/05/2024
*ಸರ್ಕಾರಿ ಸೇವೆಯ 20 ವರ್ಷಗಳು*
2001ರಲ್ಲಿ MCA ಮುಗಿಸಿ ಸಿವಿಲ್ ಸರ್ವಿಸ್ ಗೆ ತಯಾರಿ ನಡೆಸುತ್ತಿದ್ದ ಸಮಯ ಅಬಕಾರಿ ಇಲಾಖೆಯ ಉಪ ನಿರೀಕ್ಷಕರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿತ್ತು. ನನಗೆ ಕೆಲಸದ ಅನಿವಾರ್ಯತೆ ಇತ್ತಾದರೂ ಸಿವಿಲ್ ಸರ್ವಿಸ್ ತಯಾರಿಗೆ ತೊಂದರೆ ಆಗಬಾರದೆಂದು ಅರ್ಜಿ ಹಾಕುವ ಮನಸ್ಸು ಇರಲಿಲ್ಲ. ಗೆಳೆಯರೆಲ್ಲ ಅರ್ಜಿ ಹಾಕುತ್ತಿದ್ದರು, ಸ್ನೇಹಿತ ಮೇಘರಾಜು ನನಗೊಂದು ಅರ್ಜಿ ಮತ್ತು ಶುಲ್ಕ ತುಂಬಿದ ಚಲನ್ ಅನ್ನು ತಂದುಕೊಟ್ಟ. ಒಲ್ಲದ ಮನಸ್ಸಿನಿಂದಲೆ ಅರ್ಜಿ ಹಾಕಿದೆ ಪರೀಕ್ಷೆಯನ್ನು ಬರೆದೆ ಸಂದರ್ಶನ ಇಲ್ಲದ ಕಾರಣ ಸೆಲೆಕ್ಟ್ ಕೂಡ ಆದೆ. ಮಹಿಳಾ ಮೀಸಲಾತಿ ಕಾರಣ ಕೆಲವರು ಕೋರ್ಟ ಮೆಟ್ಟಲೇರಿದ್ದರಿಂದ ನೇಮಕಾತಿ 2 ವರ್ಷ ತಡವಾಗಿ, ದಿನಾಂಕ: 19-05-2004 ರಂದು ಅಬಕಾರಿ ಆಯುಕ್ತರ ಕಛೇರಿಯಲ್ಲಿ ಕರ್ತವ್ಯಕ್ಕೆ ಸೇರಿದೆ. ಆರಂಭಿಕ ತರಭೇತಿಯ ನಂತರ ಹೊಸಕೋಟೆ ತಾಲ್ಲೂಕಿನ ಜಾರಿ ಮತ್ತು ತನಿಖಾ ಅಬಕಾರಿ ಉಪ ನಿರೀಕ್ಷಕನಾಗಿ ವೃತ್ತಿ ಜೀವನ ಆರಂಬಿಸಿದೆ.
ಹೊಸಕೋಟೆ : ಅಬಕಾರಿ ಪುಟಗಳಲ್ಲಿ ಅತ್ಯಂತ ಕುಖ್ಯಾತಿ ಪಡೆದ ಹೆಸರುಗಳಲ್ಲಿ ಕಮರಿಪೇಟೆ ಬಿಟ್ಟರೆ ಹೊಸಕೋಟೆ ನಂತರದ ಸ್ಥಾನ. ಹೊಸಕೋಟೆಯ ಬೈಲನರಸಾಪುರ, ಕಟ್ಟಗೇನಹಳ್ಳಿ, ಮೇಡಿ ಮಲ್ಲಸಂದ್ರ ಮತ್ತು ಮಠ ಮಲ್ಲಸಂದ್ರ ಹೆಸರುಗಳು ಪ್ರಮುಖವಾದವು. ಪ್ರತಿ ದಿನ ಒಂದಲ್ಲ ಒಂದು ದಾಳಿ, ಆರೋಪಿ ತಲಾಸ್, ನಕಲಿ ಮದ್ಯ, ಕಳ್ಳ ಭಟ್ಟಿ, ಸೇಂದಿ ದಾಳಿ ಇಂತಹ ಕೆಲಸಗಳೆ.
ಹೊಸಕೋಟೆ ತಾಲ್ಲೂಕಿನಲ್ಲಿ ದಿನಾಂಕ : 09-02-2005 ರಿಂದ ದಿನಾಂಕ : 25-01-2010 ರವರೆಗೆ ಕೆಲಸ ಮಾಡಿದ್ದು, ಪ್ರಭಾರ ಅಬಕಾರಿ ನಿರೀಕ್ಷಕನಾಗಿ, ಪ್ರಭಾರ ಅಬಕಾರಿ ಉಪ ಅಧೀಕ್ಷಕ ನಾಗಿಯೂ ಕೆಲಸ ನಿರ್ವಹಿಸಿದ್ದು ವಿಶೇಷ. 13-1/2 ವರ್ಷದ ಅಬಕಾರಿ ಇಲಾಖಾ ಸೇವೆಯಲ್ಲಿ ತುಂಬಾ ತೃಪ್ತಿದಾಯಕ ಸೇವೆ ಎಂದರೆ ಹೊಸಕೋಟೆಯ ಸೇವೆಯೆ. 5 ವರ್ಷದ ಅವದಿಯಲ್ಲಿ ಅಬಕಾರಿ ಇಲಾಖೆಯ ಕಪ್ಪು ಪಟ್ಟಿಯಿಂದ ಹೊಸಕೋಟೆ ದೂರ ಆಗಿತ್ತು. 2008ನೇ ಸಾಲಿನ ಮೇ ಮಾಹೆಯಲ್ಲಿ ಕಳ್ಳಭಟ್ಟಿ ದುರಂತ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು, ಹೊಸಕೋಟೆ ತಾಲ್ಲೂಕಿನಲ್ಲೂ 14 ಸಾವುಗಳು ಉಂಟಾಗಿದ್ದವು. ಕೋಲಾರ, ಹೊಸಕೋಟೆ, ಆನೆಕಲ್, ಬೆಂಗಳೂರು ನಗರದ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಗಳಲ್ಲಿ ದುರಂತ ಸಂಭವಿಸಿತ್ತು. ಈ ಸಂಬಂಧವಾಗಿ ಸದರಿ ಸ್ಥಳಗಳಲ್ಲಿ ಕರ್ತವ್ಯ ನಿರ್ವಿಸುತ್ತಿದ್ದ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಅಬಕಾರಿ ಇಲಾಖೆಯ ಡಿಎಸ್ಪಿ ಮಟ್ಟದ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ನನ್ನನ್ನು ಮತ್ತು ರವಿಶಂಕರ್ (ಡಿಎಸ್ಪಿ) ರವರನ್ನು ಹೊರತುಪಡಿಸಿ. ಆ ಸಮಯದಲ್ಲಿ ಶ್ರೀ. ಚಿಕ್ಕಮಠ್ ಐ ಎ ಎಸ್, ಸಾಹೇಬರ್ ಅಬಕಾರಿ ಕಮೀಷನರ್ ಇದ್ದು ಅವರು ವರ್ಗಾವಣೆಗೊಂಡು ಶ್ರೀ. ಯೋಗೇಂದ್ರ ತ್ರಿಪಾಠಿ ಐ ಎ ಎಸ್, ರವರು ಬಂದರು. ತ್ರಿಪಾಠಿ ಸಾಹೇಬರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಣ್ಣ ಪುಟ್ಟ ತಪ್ಪು ಕಂಡು ಬಂದರೂ ಅಲ್ಲಿನ ಅಧಿಕಾರಿಗಳನ್ನ ಮುಲಾಜಿಲ್ಲದೆ ಅಮಾನತು ಮಾಡುತ್ತಿದ್ದರು, ಅಂತೆಯೆ ಹೊಸಕೋಟೆಗೂ ಬಂದು ಕಛೇರಿಗೆ ಬರುವ ಮೊದಲೆ ಬೈಲನರಸಾಪುರಕ್ಕೆ ಭೇಟಿ ಕೊಟ್ಟು ಬಂದಿದ್ದರು. ಬಂದವರು ಸಭೆ ನಡೆಸಿ ನನಗೆ ಪ್ರಭಾರ ನಿರೀಕ್ಷಕನಾಗಿ ಕೆಲಸ ಮಾಡಲು ಸೂಚಿಸಿ ಹೋದದು ವಿಶೇಷ.
ಪ್ರಭಾರ ಅಬಕಾರಿ ನಿರೀಕ್ಷಕನಾಗಿ ಬೈಲನರಸಾಪುರದ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲು ವರದಿ ಸಲ್ಲಿಸಿದ್ದೆ, ಗೂಂಡಾ ಕಾಯ್ದೆ ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ, ಆದರೆ ಅಬಕಾರಿ ಇಲಾಖೆಗೆ ನನ್ನದು ಪ್ರಥಮ ಪ್ರಕರಣಗಳು. ಶ್ರೀ. ಬಸವರಾಜ ಕಣಜಿ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ವರದಿ ಸಲ್ಲಿಸಲಾಗಿತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಶ್ರೀ. ರಾಜು ಐ ಎ ಎಸ್ ರವರು ಇದ್ದರು, ರಾಜು ಸಾಹೇಬರು ಎಷ್ಟು ಸೂಕ್ಷ್ಮ ಎಂಬುದಕ್ಕೆ - ಅಬಕಾರಿ ಇಲಾಖೆ ಪ್ರಾರಂಭದಿಂದ ಒಂದು ಸಿ ಎಲ್ 2 ಲೈಸೆನ್ಸ್ ಇತ್ತು, ಅದರ ನಕಾಶೆಯಲ್ಲಿ ಸಿ ಎಲ್ 9 ಎಂದು ನಮೂದಾಗಿದ್ದು ಸುಮಾರು 30 ವರ್ಷ ರಿನೀವಲ್ ಆಗ್ತಾ ಇತ್ತು ಅದನ್ನು ರಾಜು ಸಾಹೇಬರು ರಿನೀವಲ್ ಗೆ ಹೋದ ಸಂದರ್ಭದಲ್ಲಿ ಪತ್ತೆ ಮಾಡಿ ರೆಡ್ ಇಂಕ್ ನಲ್ಲಿ ಗುರುತು ಮಾಡಿ ಸರಿಪಡಿಸಲು ವಾಪಸ್ಸು ಕಳುಹಿಸಿದ್ದರು. ನಾನು ಇಂದಿಗೂ ಯಾವುದೇ ಸಹಿ ಮಾಡುವ ಮುಂಚೆ ಸಹೇಬರನ್ನ ನೆನೆಪಿಸಿಕೊಳ್ಳುತ್ತೇನೆ. ಅವರು ಈ ಗೂಂಡಾ ಕಾಯ್ದೆ ಯಡಿಯಲ್ಲಿ ಆರೋಪಿಯನ್ನ ಜೈಲಿಗೆ ಕಳುಹಿಸಿದ್ದರು. ಅಬಕಾರಿ ಅಧಿಕಾರಿ ವರ್ಗವೆ ನಮ್ಮ ಇಲಾಖೆಯಲ್ಲಿ ಗೂಂಡಾ ಕಾಯ್ದೆ ಜಾರಿ ಸಾಧ್ಯ ಇಲ್ಲ ಎನ್ನುತ್ತಿದ್ದರು, ತದನಂತರ ಇದೆ ಅಧಿಕಾರಿಗಳು ಸಲಹಾ ಸಮಿತಿ ಮುಂದೆ ನಿಲ್ಲಲ್ಲ ಅನ್ನುವುದಕ್ಕೆ ಶುರು ಮಾಡಿದರು.
ಈ ಮಧ್ಯೆ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಬರುತ್ತಾ ಇದ್ದೆ, ಆರೋಪಿ ಮೇಲೆ ಅನೇಕ ಅಬಕಾರಿ ಪ್ರಕರಣಗಳು ಇದ್ದವು, ಅವನಿಗೂ ಗೂಂಡಾ ಕಾಯ್ದೆ ಎಂದರೆ ಭಯ, ಕೆ ಎ 01 ಜಿ 371 ಜೀಪಿನಲ್ಲಿ ಬರಬೇಕಾದರೆ ಧೈರ್ಯ ಮಾಡಿ ಕೇಳಿದ ಗೂಂಡಾ ಕಾಯ್ದೆ ಅಂದರೆ ಏನು ಎಷ್ಟು ವರ್ಷ ಜೈಲಿನಲ್ಲಿ ಇರಬೇಕು ಇತ್ಯಾದಿ, ಅವನ ಆತಂಕ ಇದ್ದದ್ದು ಎಷ್ಟು ವರ್ಷ ಜೈಲಲ್ಲಿ ಇರಬೇಕೆನ್ನುವ ಬಗ್ಗೆ. ಕಾಯ್ದೆ ಬಗ್ಗೆ ತಿಳಿಸಿ ಗರಿಷ್ಠ 1 ವರ್ಷ ಜೈಲಿನಲ್ಲಿ ಇರಲೇ ಬೇಕಾಗುತ್ತದೆ ಎಂದು ತಿಳಿಸಿದೆ. ಅದನ್ನು ಕೇಳಿದ ಕೂಡಲೆ ಏನೋ ಒಂದು ತರಹ ಆರೋಪಿ ಖುಷಿಯಾದ ಅವನ ಮಾತು ನನಗೆ ಆಶ್ಚರ್ಯ ಮತ್ತು ದಿಗ್ಭ್ರಮೆಯನ್ನು ಉಂಟುಮಾಡಿತು, ಅವನು ಹೇಳುತ್ತಾನೆ " ನಾನ್ಯಾಕೆ ಸರ್ ಜೈಲಿನಲ್ಲಿರಲಿ, ಹಾಗಾದರೆ ಹೆಚ್ಚೆಂದರೆ 1 ವರ್ಷ ಮಾತ್ರ ಜೈಲಿನಲ್ಲಿರುತ್ತೇನೆ, ಯಾವಾಗಲು ಜೈಲಿನಲ್ಲಿ ಇರುವರು ಜೈಲ್ ಕೆಲಸಕ್ಕೆ ಸೇರಿದವರು" ಅಂದ. ಆ ಕ್ಷಣದಲ್ಲಿ ಅವನಿಗೆ ಸರಿಯಾಗಿ ಪಾಠ ಹೇಳಿಕೊಡಬೇಕು ಅನ್ನಿಸಿತು.
ಒಂದು ಕಡೆ ಗೂಂಡಾ ಕಾಯ್ದೆ ಜಾರಿ ಮಾಡಬೇಕು, ಅಕ್ರಮಗಳನ್ನು ಕಾನೂನು ರೀತ್ಯ ಬಗ್ಗು ಬಡಿಯಬೇಕು ಅನ್ನುವ ಹಠ, ಒಂದು ಕಡೆ ಇಲಾಖೆಯವರೆ ಇದು ಆಗುತ್ತಾ ಅನ್ನುವ ಕೊಂಕು ಮಾತು, ಮತ್ತೊಂದು ಕಡೆ ಜಾರಿ ಆದರೂ ನನ್ನನ್ನ ಏನೂ ಮಾಡಲು ಸಾಧ್ಯ ಇಲ್ಲ ಎನ್ನುವ ಆರೋಪಿ, ಈ ನಡುವೆ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಗಳಾದ ಶ್ರೀಮತಿ ಮಂಜುಳ ಚೆಲ್ಲೂರುರವರ ನೇತೃತ್ವದಲ್ಲಿ ತ್ರಿಸದಸ್ಯ ಸಲಹಾ ಸಮಿತಿ ರಚನೆಗೊಂಡು ಆರೋಪಿಯನ್ನು ಹಾಜರುಪಡಿಸಿ ಇಲಾಖಾ ಪರವಾಗಿ ಡಿಎಸ್ಪಿ ಅಥವಾ ಮೇಲ್ಮಟ್ಟದ ಅಧಿಕಾರಿ ಬಂದು ಕೇಸ್ ವಿವರ ನೀಡಲಿ ಎಂದು ಪತ್ರ ಬಂತು. ಹೊಸಕೋಟೆ ಉಪ ವಿಭಾಗದಲ್ಲಿ ಇನ್ ಚಾರ್ಜ್ ಡಿಎಸ್ಪಿ ಇದ್ದರು ಅವರು ಈ ಪತ್ರ ನೋಡಿ ರಜೆ ಮೇಲೆ ಹೊರಟು ಹೋದರು. ಬೇರೆಯವರು ಬರಲು ಸಿದ್ದ ಇಲ್ಲ, ಅನಿವಾರ್ಯವಾಗಿ ಸಬ್ ಇನ್ಸ್ಪೆಕ್ಟರ್ ಆದ ನಾನು ಡಿಎಸ್ಪಿ ಇನ್ ಚಾರ್ಜ್ ನಲ್ಲಿ ಸಲಹಾ ಸಮಿತಿ ಮುಂದೆ ಹಾಜರಾಗಬೇಕಾಯಿತು. ನನ್ನೊಂದಿಗೆ ಡಿಎಸ್ಪಿ ರವಿಶಂಕರ್ ರವರು, ಕೊಲಾರದ ಪೊಲೀಸ್ ಡಿಎಸ್ಪಿ ಕೃಷ್ಣಪ್ಪ ರವರು ಬಂದಿದ್ದರು.ಅವರ ವ್ಯಾಪ್ತಿಯಲ್ಲೂ ಇದ್ದ ಪ್ರಕರಣಗಳನ್ನು ಉಲ್ಲೇಖ ಮಾಡಿದ್ದೆ. ನನ್ನನ್ನ ನೋಡಿ ಮೇಡಂ ಸಬ್ ಇನ್ಸ್ಪೆಕ್ಟರ್ ಯಾಕೆ ಬಂದಿದ್ದಾರೆ ಅಂತ ಕೇಳಿದರು. ನಾನೆ ವರದಿ ತಯಾರಿಸಿ ಕಳುಹಿಸಿದ್ದ ಕಾರಣ ಸಮಂಜಸವಾಗಿ ವಿವರ ನೀಡಿದೆ. ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿವರನ್ನು ಒಪ್ಪಿದ್ದಾರೆ ಅಂತ ಅನ್ನಿಸಿತು ಆದರೂ ಎಲ್ಲೊ ಒಂದು ಕಡೆ ಆಗದಿದ್ದರೆ ಅನ್ನುವ ಆತಂಕ. ಒಂದು ವಾರದ ನಂತರ ಸಲಹಾ ಸಮಿತಿ ಗೂಂಡಾ ಕಾಯ್ದೆ ಕ್ರಮಬದ್ಧವಾಗಿದೆ ಎಂದು ಒಳಾಡಳಿತ ಇಲಾಖೆಗೆ ವರದಿಸಿರುವುದು ಗೊತ್ತಾಯಿತು.
ಮುಂದುವರಿಯುವುದು

30/01/2024
26/01/2024
26/01/2024
25/01/2024
23/01/2024
22/01/2024
21/01/2024
19/01/2024
17/01/2024
15/01/2024
10/01/2024