24/09/2026
*ಜ್ಞಾನೇಶ್ ಕುಮಾರ್ಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಮುಂದುವರಿಯುವ ಹಕ್ಕಿಲ್ಲ!*
*ಚುನಾವಣಾ ಆಯೋಗವನ್ನು ಸುಧಾರಿಸಬೇಕು-ಸಿಪಿಐ(ಎಂ) ಪೊಲಿಟ್ಬ್ಯುರೊ*
ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ (ಸೆಪ್ಟೆಂಬರ್ 23) ಹೊರಗೆಡಹಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸುತ್ತಲಿನ ಸ್ಫೋಟಕ ಸಂಗತಿಗಳು ಈ ಪ್ರಕ್ರಿಯೆಯ ಬಗ್ಗೆ ಮಾತ್ರವಲ್ಲದೆ, ಮುಖ್ಯವಾಗಿ ಭಾರತ ಚುನಾವಣಾ ಆಯೋಗದ (ECI) ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
SIR ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಸಿಪಿಐ(ಎಂ), ಇತರ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಎತ್ತಿರುವ ಅನುಮಾನಗಳು ಮತ್ತು ಕಳವಳಗಳನ್ನು ಈ ಸಂಗತಿಗಳು ಬಲಪಡಿಸಿವೆ.
ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು SIR ಪ್ರಕ್ರಿಯೆಗೆ ಸಂಬಂಧಿಸಿದ ಹಲವಾರು ನಿರ್ಧಾರಗಳಿಗೆ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಕಾನೂನಿನ ಪ್ರಕಾರ ಮೂವರು ಚುನಾವಣಾ ಆಯುಕ್ತರು ಸಮಾನರು ಮತ್ತು ಯಾವುದೇ ಭಿನ್ನಾಭಿಪ್ರಾಯವನ್ನು ಬಹುಮತ ಅಥವಾ ಸರ್ವಾನುಮತದಿಂದ ಇತ್ಯರ್ಥಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತರು(CEC-ಸಿಇಸಿ)) ಈ ನಿಯಮವನ್ನು ಅನುಸರಿಸಲಿಲ್ಲ, ಆಯೋಗದ ತನ್ನ ಇತರ ಸಹೋದ್ಯೋಗಿಗಳು ಎತ್ತಿರುವ ಆಕ್ಷೇಪಣೆಗಳನ್ನು ಲೆಕ್ಕಿಸದೆ ತನ್ನ ಅಭಿಪ್ರಾಯಗಳನ್ನು ಹೇರುತ್ತಲೇ ಹೋದರು. ಗಮನಾರ್ಹವಾಗಿ, ಈ ಭಿನ್ನಾಭಿಪ್ರಾಯಗಳು ಮತದಾರರ ಪಟ್ಟಿಗೆ ಮತದಾರರನ್ನು ಹೇಗೆ ಸೇರಿಸಲಾಗುತ್ತಿದೆ ಅಥವಾ ತೆಗೆದುಹಾಕಲಾಗುತ್ತಿದೆ ಮತ್ತು SIR ಅನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ ಎಂಬ ಮೂಲಭೂತ ಪ್ರಶ್ನೆಗಳಿಗೆ ಸಂಬಂಧಿಸಿವೆ.
ಈಗ ಬಹಿರಂಗವಾಗುತ್ತಿರುವ ಸಂಗತಿಯೆಂದರೆ, ಮುಖ್ಯ ಚುನಾವಣಾ ಆಯುಕ್ತರು ಇಡೀ ಪ್ರಕ್ರಿಯೆಯು ಪಾರದರ್ಶಕ ಮತ್ತು ವಿಕೇಂದ್ರೀಕೃತವಾಗಿದೆ ಎಂದು ಸುಳ್ಳು ದಾವೆ ಹೇಳಿಕೊಂಡು ಬಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇಡೀ ವ್ಯವಸ್ಥೆಯು ಎಷ್ಟು ಕೇಂದ್ರೀಕೃತವಾಗಿದೆಯೆಂದರೆ,ಯಾರು ನಿಜವಾಗಿಯೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅದು ಮರೆಮಾಡುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ಕೂಡ ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಮತ್ತು "ಯಾಂತ್ರಿಕ" ನೋಟಿಸ್ ಜಾರಿಯನ್ನು ಗುರುತಿಸಿದೆ.
ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಪ್ರಶ್ನೆಗಳು ಎಸ್ಐಆರ್ ಪ್ರಕ್ರಿಯೆಯನ್ನು ಮೀರಿವೆ. ಇದು ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವಿಪರೀತ ಕೇಂದ್ರೀಕರಣದ ಮೇಲೆ ಮತ್ತು ಸಾರ್ವತ್ರಿಕ ವಯಸ್ಕ ಮತದಾನಹಕ್ಕಿನ ರಕ್ಷಣೆಗೆ ಸಂಬಂಧಿಸಿದೆ. ನಿಷ್ಪಕ್ಷಪಾತೀ ಸಂಸ್ಥೆ ಎಂಬ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಅಪಾಯದಲ್ಲಿದೆ. ರಾಜಿ ಮಾಡಿಕೊಂಡ ಚುನಾವಣಾ ಆಯೋಗದಲ್ಲಿ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ, ಇದಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರು ಇನ್ನು ಮುಂದೆ ತನ್ನ ಹುದ್ದೆಯಲ್ಲಿ ಇರಲು ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೂಡ ಆಗ್ರಹಿಸಿದೆ.
ಭಾರತದ ಚುನಾವಣಾ ಆಯೋಗದ ಸಮಗ್ರತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಪುನಃಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು, ಸಂಬಂಧಪಟ್ಟ ಶಾಸನವನ್ನು ರದ್ದು ಮಾಡಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಆಯ್ಕೆ ಸಮಿತಿಯ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಸ್ವೀಕರಿಸಿ ಒಂದು ಹೊಸ ಶಾಸನವನ್ನು ತರುವ ಮೂಲಕ ಖಚಿತಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.