09/10/2026
ಇಂದು ನವದೆಹಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ, ಕರ್ನಾಟಕದ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಯಾತ್ರಾರ್ಥಿಗಳ ಸೇವೆಗಳಿಗೆ ಸಂಬಂಧಿಸಿದಂತೆ ಗಂಭೀರ ಸಮಾಲೋಚನೆ ನಡೆಸಿ ಮನವಿಗಳನ್ನು ಸಲ್ಲಿಸಲಾಯಿತು.
ಜೊತೆಗೆ 2026-27ನೇ ಸಾಲಿನ ಹಜ್ ವ್ಯವಸ್ಥೆಗಳ ಕುರಿತು ಚರ್ಚಿಸಿ, ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಒಟ್ಟಾರೆ ಉತ್ತಮ ವ್ಯವಸ್ಥೆ ಮಾಡಿದ್ದಕ್ಕಾಗಿ ಮಾನ್ಯ ಸಚಿವರಿಗೆ ಈ ಭೇಟಿಯ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಲಾಯಿತು.
◼️2026-27ರಲ್ಲಿ ಯಾತ್ರಾರ್ಥಿಗಳು ಎದುರಿಸಿದ ಸ್ಮಾರ್ಟ್ ವಾಚ್, ಕೇಟರಿಂಗ್ ಸೇವೆ, ಬೆಂಗಳೂರಿನಿಂದ ದೊಡ್ಡ ವಿಮಾನಗಳ ಸೌಲಭ್ಯ (A330/B787/B777), ಮಂಗಳೂರು ಎಂಬಾರ್ಕೇಶನ್ ಕೇಂದ್ರ ಪುನರಾರಂಭ ಹಾಗೂ ಮಕ್ಕಾದಲ್ಲಿ ವಸತಿ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳು ಕುರಿತು ವಿವರವಾದ ಪತ್ರ ನೀಡಿ ಚರ್ಚಿಸಲಾಯಿತು.
ಈ ಕುರಿತು ಶೀಘ್ರವೇ ಸಭೆಯನ್ನು ಕರೆದು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾನ್ಯ ಕೇಂದ್ರ ಸಚಿವರು ಭರವಸೆ ನೀಡಿದರು.
◼️ಕರ್ನಾಟಕ ರಾಜ್ಯ ಹಜ್ ಸಮಿತಿ ಮೂಲಕ ಉಮ್ರಾ ಯಾತ್ರೆ:
ಪ್ರತಿ ವರ್ಷ ಕರ್ನಾಟಕದಿಂದ 10,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ತೆರಳಿ ಅನುಭವಿಸುತ್ತಿರುವ ವಂಚನೆ ಹಾಗೂ ದುಬಾರಿ ವೆಚ್ಚವನ್ನು ತಪ್ಪಿಸಲು, ಕರ್ನಾಟಕ ರಾಜ್ಯ ಹಜ್ ಸಮಿತಿ ಮೂಲಕ "ಲಾಭವೂ ಇಲ್ಲ, ನಷ್ಟವೂ ಇಲ್ಲ" ಆಧಾರದಲ್ಲಿ ಉಮ್ರಾ ಯಾತ್ರೆ ಆಯೋಜಿಸಲು ಅನುಮೋದನೆ ಕೋರಲಾಯಿತು.
◼️PMJVK ಅಡಿ ಬಾಕಿ ಇರುವ 25 ಯೋಜನೆಗಳಿಗೆ ಅನುಮೋದನೆ (₹294.53 ಕೋಟಿ):
ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮದಡಿ (PMJVK) ಅಲ್ಪಸಂಖ್ಯಾತರ ನಿರ್ದೇಶನಾಲಯದ ಬಾಕಿ ಇರುವ ₹294.53 ಕೋಟಿ ಮೊತ್ತದ 25 ಯೋಜನೆಗಳಿಗೆ (1 ಆಸ್ಪತ್ರೆ – ₹45.50 ಕೋಟಿ, 4 ಕೌಶಲ್ಯ ಕೇಂದ್ರಗಳು – ₹72.00 ಕೋಟಿ, 5 ವಸತಿ ಶಾಲೆಗಳು – ₹95.00 ಕೋಟಿ, 11 ವಿದ್ಯಾರ್ಥಿ ನಿಲಯಗಳು – ₹67.40 ಕೋಟಿ, 4 ದಿನದ ಶಾಲೆಗಳು – ₹14.63 ಕೋಟಿ)
ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಲಾಯಿತು. ಈ ಕುರಿತ ಅಗತ್ಯ ದಾಖಲೆಗಳನ್ನು 1 ಅಕ್ಟೋಬರ್ 2026ರಂದೇ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
◼️PM VIKAS ಪೋರ್ಟಲ್ ಲಾಗಿನ್ ಪ್ರವೇಶ:
PM VIKAS ಯೋಜನೆಯಡಿ ಕರ್ನಾಟಕದ 5,790 ಫಲಾನುಭವಿಗಳಿಗೆ ಅನುಕೂಲವಾಗುವಂತೆ, ರಾಜ್ಯ ಚಾನಲೈಸಿಂಗ್ ಏಜೆನ್ಸಿಯಾದ ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಪೋರ್ಟಲ್ ಲಾಗಿನ್ ವಿವರಗಳನ್ನು ಶೀಘ್ರವಾಗಿ ನೀಡುವಂತೆ ಕೋರಲಾಯಿತು.
◼️ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಸಮ್ಮೇಳನ & ಅಂತರಧರ್ಮೀಯ ಸಮ್ಮೇಳನ:
ದೇಶಾದ್ಯಂತದ 'ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಸಮ್ಮೇಳನ' (Minority Ministers Conference) ಆಯೋಜಿಸುವ ಕುರಿತು ಸಚಿವರೊಂದಿಗೆ ಸಮಾಲೋಚಿಸಲಾಯಿತು. ಇದರೊಂದಿಗೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ತಿಳುವಳಿಕೆ ಹಾಗೂ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ದೇಶದ ಎಲ್ಲಾ ರಾಜ್ಯಗಳಲ್ಲಿ 'ಅಂತರಧರ್ಮೀಯ ಸಮ್ಮೇಳನಗಳನ್ನು' (Inter-faith Religious Conferences) ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
◼️ಕರ್ನಾಟಕ ರಾಜ್ಯ ಹಜ್ ಸಮಿತಿಗೆ ಕೇಂದ್ರದಿಂದ ಪ್ರಶಂಸೆ:
ಇಡೀ ದೇಶದಲ್ಲೇ 'ಕರ್ನಾಟಕ ರಾಜ್ಯ ಹಜ್ ಸಮಿತಿ'ಯು ಅತ್ಯಂತ ದಕ್ಷತೆಯಿಂದ ಹಾಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾನ್ಯ ಕೇಂದ್ರ ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.
ನಮ್ಮ ಈ ಎಲ್ಲಾ ಮನವಿಗಳು ಮತ್ತು ಪ್ರಸ್ತಾವನೆಗಳಿಗೆ ಮಾನ್ಯ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಮ್ರಾ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಹಜ್ ಸಮಸ್ಯೆಗಳ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ಕರೆಯುವುದಾಗಿ ಹಾಗೂ PMJVK ಯೋಜನೆಗಳ ಕುರಿತು ಸನ್ಮಾನ್ಯ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.