05/10/2026
*ಧರ್ಮದ ಹೆಸರಿನ ಸ್ವಾರ್ಥದ ಆಟ, ಭ್ರಷ್ಟ ಮುಖಗಳು ಮತ್ತು ಕಾರ್ಯಕರ್ತರ ಶೋಷಣೆ*
*ದೀಪು ಶೆಟ್ಟಿಗಾರ್ ಮಂಗಳೂರು*
ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಇವತ್ತು ರಾಜಕೀಯ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಒಂದು ಕಟು ವಾಸ್ತವವನ್ನು ಮತ್ತು ನನ್ನನ್ನು ಬಹುವಾಗಿ ಕಾಡುತ್ತಿರುವ ತೀವ್ರವಾದ ನೋವು ಮತ್ತು ಆಕ್ರೋಶವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.
ನಾವು ಚುನಾವಣೆಗಳ ಸಮಯದಲ್ಲಿ ಅದೆಷ್ಟೋ ನಾಯಕರ ಅಬ್ಬರದ ಭಾಷಣಗಳನ್ನು ಕೇಳುತ್ತೇವೆ. "ಧರ್ಮ ಅಪಾಯದಲ್ಲಿದೆ, ಸಂಸ್ಕೃತಿಯ ರಕ್ಷಣೆ ನಮ್ಮ ಜವಾಬ್ದಾರಿ" ಎಂದು ವೇದಿಕೆಗಳ ಮೇಲೆ ಭಾವನಾತ್ಮಕವಾಗಿ ಮಾತನಾಡುವಾಗ ನಮ್ಮ ಯುವಕರ ರಕ್ತ ಕುದಿಯುತ್ತದೆ. ತಮ್ಮ ಮನೆ, ಸಂಸಾರ, ಸ್ವಂತ ದುಡಿಮೆ, ಭವಿಷ್ಯ ಎಲ್ಲವನ್ನೂ ಬದಿಗೊತ್ತಿ, ಆ ನಾಯಕರನ್ನು ಗೆಲ್ಲಿಸುವುದೇ ಧರ್ಮಕ್ಕೆ ಮಾಡುವ ಸೇವೆ ಎಂದು ನೂರಾರು ಯುವಕರು ಹಗಲಿರುಳು ಬೀದಿಯಲ್ಲಿ ನಿಂತು ದುಡಿಯುತ್ತಾರೆ. ಅಷ್ಟೇ ಯಾಕೆ, ಧರ್ಮದ ಹೆಸರಿನಲ್ಲಿ ಪರಸ್ಪರ ಜಗಳ ಆಡಿಕೊಂಡು, ಪೋಲೀಸ್ ಸ್ಟೇಷನ್, ಕೋರ್ಟ್ ಎಂದು ತಮ್ಮ ಬದುಕನ್ನು ಕೋರ್ಟ್ ಮೆಟ್ಟಿಲುಗಳ ಮೇಲೆ ಸವೆಸುತ್ತಾರೆ.
ಆದರೆ, ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ... ಇಷ್ಟೆಲ್ಲಾ ಹೋರಾಟ ಮಾಡಿ ಆ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಏನಾಗುತ್ತದೆ?
ಯಾವ ಸಿದ್ಧಾಂತದ ಹೆಸರಿನಲ್ಲಿ ಅವರು ಮತ ಕೇಳಿದ್ದರೋ, ಅಧಿಕಾರ ಸಿಕ್ಕ ತಕ್ಷಣ ಆ ಸಿದ್ಧಾಂತಗಳು ಮರೆತುಹೋಗುತ್ತವೆ. ಇವತ್ತಿನ ರಾಜಕೀಯದ ಕೆಲವು ನಾಯಕರ ಮುಖಗಳನ್ನು ನೋಡಿದಾಗ ಇಡೀ ಮನುಷ್ಯ ಜಾತಿಗೆ ಇವರು ನಾಲಾಯಕ್ ಎಂಬ ಭಾವನೆ ಬರುತ್ತದೆ ಮತ್ತು ಅಸಹ್ಯದಿಂದ ವಾಂತಿ ಬರುವಂತಾಗುತ್ತದೆ. ಧರ್ಮದ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ತಿಂದು ತೇಗಿದ ಇಂತಹ ಭ್ರಷ್ಟ ಮುಖಗಳು, ಅಧಿಕಾರ ಬಳಸಿಕೊಂಡು ತಮ್ಮ ಆಸ್ತಿಪಾಸ್ತಿಗಳನ್ನು ಡಬಲ್ ಮಾಡಿಕೊಳ್ಳುತ್ತವೆ. ಇಷ್ಟೆಲ್ಲಾ ಲೂಟಿ ಹೊಡೆದ ಮೇಲೂ, ಇಂದಿಗೂ ಅದೇ ನಿರ್ಲಜ್ಜತನದಿಂದ ವೇದಿಕೆಗಳ ಮೇಲೆ ನಿಂತು ಹಿಂದುತ್ವ ಮತ್ತು ಧರ್ಮದ ಬಗ್ಗೆ ಇವರು ಮಾತನಾಡುವುದನ್ನು ನೋಡಿದಾಗ ಇವರ ಸ್ವಾರ್ಥ ಮತ್ತು ಬೂಟಾಟಿಕೆ ಎಂತಹದ್ದು ಎಂಬುದು ಅರ್ಥವಾಗುತ್ತದೆ.
ನಾಯಕರ ಗಮನವೆಲ್ಲಾ ಕೇವಲ ತಮ್ಮ ಕುಟುಂಬದ ಅಭಿವೃದ್ಧಿ ಮತ್ತು ತಮ್ಮ ಮುಂದಿನ ತಲೆಮಾರಿಗೆ ರಾಜಕೀಯ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳುವುದರ ಕಡೆಗೇ ಇರುತ್ತದೆ. ಬೀದಿಯಲ್ಲಿ ನಿಂತು ಘೋಷಣೆ ಕೂಗಿದ, ಲಾಠಿ ಏಟು ತಿಂದ ಸಾಮಾನ್ಯ ಕಾರ್ಯಕರ್ತ ಕೊನೆಗೆ ನಾಯಕನ ಗೇಟಿನ ಹೊರಗೇ ಉಳಿದುಬಿಡುತ್ತಾನೆ.
ಕೆಲವು ರಾಜಕೀಯ ಪಕ್ಷಗಳು ಬೇರೆ ಧರ್ಮದವರನ್ನು ಓಲೈಸುತ್ತವೆ ಮತ್ತು ಗೆದ್ದ ನಂತರ ಅವರ ಪರವಾಗಿಯೇ ಗಟ್ಟಿಯಾಗಿ ನಿಲ್ಲುತ್ತವೆ. ಆದರೆ ನಮ್ಮ ಹಿಂದೂಗಳನ್ನು ಓಲೈಸುವ ಪಕ್ಷಗಳು ಮಾತ್ರ ನಮ್ಮನ್ನು ಕೇವಲ ಚುನಾವಣೆ ಗೆಲ್ಲಲು ಬೇಕಾದ 'ವೋಟ್ ಬ್ಯಾಂಕ್' ಆಗಿ ಬಳಸಿಕೊಳ್ಳುತ್ತವೆ! ಮುಂದಿನ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗೆಲುವಿನ ಲೆಕ್ಕಾಚಾರಕ್ಕಾಗಿ ಅದೇ ನಾಯಕರು, ಅಲ್ಲಿಯವರೆಗೆ ತಾವು ಸಾರ್ವಜನಿಕವಾಗಿ ಯಾರನ್ನು ತೀವ್ರವಾಗಿ ವಿರೋಧಿಸುತ್ತಿದ್ದರೋ, ಅದೇ ಬೇರೆ ಪಕ್ಷದ ನಾಯಕರುಗಳನ್ನು ರಹಸ್ಯವಾಗಿ ಓಲೈಸಲು ಶುರು ಮಾಡುತ್ತಾರೆ. ಅಧಿಕಾರದ ಕುರ್ಚಿಗಾಗಿ, ತಮ್ಮ ಸ್ವಾರ್ಥದ ಆಟಕ್ಕಾಗಿ ಹಿಂಬಾಗಿಲಿನಿಂದ ಕೈಜೋಡಿಸುವ ಇಂತಹ ರಾಜಕಾರಣಿಗಳನ್ನು ನೋಡಿದಾಗ ಇಡೀ ವ್ಯವಸ್ಥೆಯ ಬಗ್ಗೆ ಬೇಸರ ಮೂಡುತ್ತದೆ.
ಇತ್ತೀಚೆಗೆ ಚುನಾವಣೆಗಳಲ್ಲಿ "ಮೆಷಿನ್ ಸೆಟ್ಟಿಂಗ್ (EVM)" ಮಾಡಲಾಗಿದೆ ಎಂದು ಕೆಲವು ಪಕ್ಷಗಳು ಆರೋಪಿಸುವುದನ್ನು ನೀವು ನೋಡಿರಬಹುದು. ಆದರೆ ನಾನು ನಿಮಗೆ ಹೇಳಲು ಬಯಸುವುದು ಇಷ್ಟೇ: ಇಲ್ಲಿ ಮೆಷಿನ್ ಸೆಟ್ಟಿಂಗ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಕೆಲವು ರಾಜಕೀಯ ಪಕ್ಷಗಳು ನಮ್ಮ ಪವಿತ್ರವಾದ ಭಕ್ತಿ, ನಂಬಿಕೆ ಮತ್ತು ಭಾವನೆಗಳನ್ನು ಬಳಸಿಕೊಂಡು 'ಧರ್ಮವನ್ನೇ ಸೆಟ್ಟಿಂಗ್' ಮಾಡಿಬಿಟ್ಟಿವೆ!
ಈ ಸ್ವಾರ್ಥದ ಮತ್ತು ಭ್ರಷ್ಟ ಆಟ ನಿಲ್ಲಬೇಕಾದರೆ, ಕೆಳಮಟ್ಟದಲ್ಲಿ ಹಗಲಿರುಳು ದುಡಿಯುವ ನಿಷ್ಠಾವಂತ ಕಾರ್ಯಕರ್ತರ ಬದುಕಿನಲ್ಲಿ ಬೆಳಕು ಬರಬೇಕಾದರೆ ಪಕ್ಷಗಳ ಈ ಹಳೆಯ ಸ್ವಾರ್ಥಿ ಹಾಗೂ ಭ್ರಷ್ಟ ನಾಯಕರುಗಳು ಬದಲಾಗಲೇಬೇಕು. ಅವರ ಜಾಗಕ್ಕೆ ಕೇವಲ ಹೆಸರಿಗಾಗಿ ಬದಲಾಗುವವರಲ್ಲ, ಬದಲಾಗಿ ಕಾರ್ಯಕರ್ತರ ನೋವಿಗೆ ಹೆಗಲು ಕೊಡುವ, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮತ್ತು ಸಮಾಜದ ತಳಮಟ್ಟದ ವಾಸ್ತವವನ್ನು ಅರಿತಿರುವ ಹೊಸ ಮುಖಗಳು ನಾಯಕತ್ವಕ್ಕೆ ಬರಬೇಕಾಗಿದೆ. ಯುವಕರ ತ್ಯಾಗವನ್ನು ಗೌರವಿಸುವ ಮತ್ತು ಸಾಮಾನ್ಯ ಕಾರ್ಯಕರ್ತನನ್ನೂ ಮುಂಚೂಣಿಗೆ ತರುವ ಹೊಸ ತಲೆಮಾರಿನ ನಾಯಕತ್ವ ಉದಯಿಸದ ಹೊರತು ಸಾಮಾನ್ಯ ಕಾರ್ಯಕರ್ತರ ಶೋಷಣೆ ಹೀಗೆಯೇ ಮುಂದುವರೆಯುತ್ತದೆ.
ನನ್ನ ಪ್ರೀತಿಯ ಬಂಧುಗಳೇ, ಯುವ ಕಾರ್ಯಕರ್ತರೇ... ಧರ್ಮ ಇರುವುದು ನಮ್ಮ ಬದುಕಿನಲ್ಲಿ, ನಮ್ಮ ಆಚರಣೆಯಲ್ಲಿ. ಯಾರೋ ರಾಜಕಾರಣಿ ಬಂದು ಭಾಷಣ ಮಾಡಿದ ತಕ್ಷಣ ನಮ್ಮ ಭಾವನೆಗಳನ್ನು ಅವರ ಸ್ವಾರ್ಥಕ್ಕಾಗಿ ಒತ್ತೆ ಇಡಬೇಡಿ. ಧರ್ಮವನ್ನು ಹೃದಯದಲ್ಲಿ ಇಟ್ಟುಕೊಳ್ಳಿ, ಆದರೆ ಮತ ಚಲಾಯಿಸುವಾಗ ನಿಮ್ಮ ಊರಿನ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಮತ್ತು ಆ ನಾಯಕನ ಪ್ರಾಮಾಣಿಕತೆಯನ್ನು ನೋಡಿ ನಿರ್ಧಾರ ಮಾಡಿ.ಭಾವನೆಗಳಿಗೆ ಬಲಿಯಾಗದೆ, ಜಾಗೃತರಾದಾಗ ಮತ್ತು ಹೊಸ ಪ್ರಾಮಾಣಿಕ ಮುಖಗಳನ್ನು ಬೆಂಬಲಿಸಿದಾಗ ಮಾತ್ರ ನಮ್ಮ ಬದುಕು ಮತ್ತು ಈ ದೇಶದ ಪ್ರಜಾಪ್ರಭುತ್ವ ಎರಡೂ ಸುಧಾರಿಸಲು ಸಾಧ್ಯ.