02/11/2024
"ಸಾಂಸ್ಕೃತಿಕ ಪಲ್ಲಟದ ಪಳೆಯುಳಿಕೆ-ದೀಪಾವಳಿ ಹಬ್ಬ"
ಮೈಸೂರು ನಾಯಕರಲ್ಲಿ ದೀಪಾವಳಿ ಆಚರಿಸದ ಒಂದು ವರ್ಗದ ಜನರಿದ್ದಾರೆ ಎಂಬುದು ಎಷ್ಟು ಜನರಿಗೆ ತಿಳಿದಿದೆ..
ಇವರ ಕುಲ (ಬೆಡಗು)ದ ಹೆಸರು "ರಾಕ್ಷಸ/ರಕ್ಕಸ" ಕುಲ. ಇವರು ದೀಪಾವಳಿಯ ದಿನದಂದು ಮನೆ ಮುಂದೆ ಒಣ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿ ಶೋಕಾಚರಣೆ ಮಾಡುತ್ತಾರೆ. ಇವರು ತಮ್ಮನ್ನು ಮಹಾಬಲಿಯ ವಂಶದವರೆಂದು ಗುರುತಿಸಿಕೊಳ್ಳುತ್ತಾರೆ. ಈ ಜನರ ಕುಲದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು. ಜೈನರು ಈಕೆಯನ್ನು ಜೈನ ಯಕ್ಷಿಣಿಯಲ್ಲಿ ಓರ್ವಳಾದ "ಚಾಮುಂಡಿ" ಎನ್ನುವರು. ಈ ರಕ್ಕಸ ಕುಲದ ನಾಯಕರು ಮಹಾಬಲಿಯು ಸ್ಥಾಪಿಸಿದನೆಂದು ನಂಬಲ್ಪಟ್ಟ ಶ್ರೀ ಮಹಾಬಲೇಶ್ವರ ಸ್ವಾಮಿಯನ್ನು ಕೂಡ ಆರಾಧಿಸುವರು.
ಇವರ ದಾಯದಿ ಕುಲದವರು "ಗಜ/ಆನೆ" ಕುಲದವರು. ಇವರು ತಲಕಾಡು ಸುತ್ತಮುತ್ತಾ ಕಂಡುಬರುವರು. ಇವರು ಗಂಗವಂಶದ ಕೊನೆಯ ಅರಸನೆಂದು ಗುರುತಿಸಿಕೊಂಡ ರಕ್ಕಸ ಶ್ರವಣ ಚಕ್ರವರ್ತಿಯ ವಂಶದವರೆಂದು ಕರೆದುಕೊಳ್ಳುವರು. ಹಾಗೂ ಈ ಶ್ರವಣ ಚಕ್ರವರ್ತಿಗೆ ದೀಪಾವಳಿಯಂದೇ ತಲೆಮಲೆಯ ಶ್ರವಣಬೋಳಿಯಲ್ಲಿ ಶ್ರಾದ್ಧ (ತಿಥಿ) ಕಾರ್ಯ ಮಾಡುವರು.
ಈ ಶ್ರವಣ ಚಕ್ರವರ್ತಿಯನ್ನು ಓರ್ವ ಜೈನಯತಿಯೆಂದು ದೇವಚಂದ್ರ ಕವಿಯು ತನ್ನ ರಾಜಾವಳಿ ಕಥಾಸಾರ ಕೃತಿಯಲ್ಲಿ ಗುರುತಿಸಿರುವನು. ಈ "ಗಜ" ವಂಶದ ನಾಯಕರ ಕುಲದೇವತೆ "ರಾಕಸಮ್ಮ" ಎಂಬ ದೇವತೆ. ಈಕೆಯನ್ನು ಜೈನರ ಯಕ್ಷಿಣಿಯಾದ ಅಂಬಿಕಾದೇವಿ ಅಥವಾ ಕೂಷ್ಮಾಂಡಿನಿ ದೇವಿ ಎಂತಲೂ ಕರೆಯುವರು.
ರಕ್ಕಸ ಹಾಗೂ ಗಜ ಕುಲದವರ ಮತ್ತೊಂದು ದಾಯದಿ ವಂಶ "ಮಹಿಷ" (ಎರುಮೈ/ಎಮ್ಮೆ/ಎನುಮಲೋರ್) ಕುಲದ ಜನರು. ಇವರೆಲ್ಲರೂ "ಗಂಗ" ಹೆಸರಿನಡಿ ಕ್ರಮವಾಗಿ ತೊರೆ ಸೀಮೆಯನ್ನು (ಕಾವೇರಿ ಹಾಗೂ ಕಪಿಲಾ ನಡುವಣ ಪ್ರದೇಶ) ಆಳಿದ್ದಾಗಿ ಪ್ರತೀತಿ ಹೊಂದಿರುವರು. ಇವರು ಮಹಿಷಾಸುರ ಮರ್ಧಿನಿ ಅಮ್ಮನವರನ್ನು ತಮ್ಮ ಕುಲದೇವತೆಯಾಗಿ ಆರಾಧಿಸುವರು. ಈಕೆಯನ್ನು ಜೈನರಲ್ಲಿ ವಾಸಂತಿಕಾದೇವಿ ಎಂದೂ ಕರೆಯಲಾಗಿದೆ.
ತಾವು ಆದಿಶಕ್ತಿಯ ಕುಲದವರೆಂದು ಗುರುತಿಸಲ್ಪಡುವ, ತಮ್ಮ ಯುದ್ಧ ಪರಂಪರೆಯ ಭಾಗವಾಗಿ ಶಾಕ್ತ ಆರಾಧನೆಯನ್ನೇ ಪ್ರಮುಖ ಆಚಾರವಾಗಿ ಹೊಂದಿರುವ ನಾಯಕ ಜನಾಂಗದಲ್ಲಿ, ರಾಕ್ಷಸ ಕುಲದವರೆಂದು ಗುರುತಿಸಲ್ಪಡುವ ಜನರಿರುವುದು ಹಾಗೂ ಪರಸ್ಪರ ಸಂಬಂಧ ಹೊಂದಿರುವುದು ಒಂದು ಸೋಜಿಗದಂತೆಯೇ ತೋರುವುದು.
ಅಲ್ಲದೇ ಇಂದು ಕರ್ಮಟ ಹಿಂದೂಗಳಾಗಿ, ಪ್ರಾಣಿಜನ್ಯ ಆಹಾರ ಸಂಸ್ಕೃತಿಯನ್ನು ಪ್ರಮುಖವಾಗಿ ಹೊಂದಿರುವ ನಾಯಕರಿಗೂ ಸಾತ್ವಿಕ ಜೈನ ಸಂಸ್ಕೃತಿಗೂ ಹೇಗೆ ಸಂಬಂಧ ಎಂಬುದು ನನಗಂತೂ ಇಲ್ಲಿಯವರೆಗೂ ಒಂದು ಜಿಜ್ಞಾಸೆಯಾಗಿದೆ.
ಈ ಜಿಜ್ಞಾಸೆಯ ನಡುವೆ "ಆರ್ಯ-ದ್ರಾವಿಡ" ಸಂಘರ್ಷದ ಸಿದ್ಧಾಂತ ಎಲ್ಲಿಗೆ ತೂರಿಸಲಾಗುವುದು? ನನಗಂತೂ ಗೊತ್ತಿಲ್ಲ...
ಅಂದಹಾಗೆ ನಾಡಿನ ಸಮಸ್ತ ಕನ್ನಡಿಗರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🎉🎊
✍🏽ಪಾಳೇಗಾರ್ ದೀಪಕ್, ಮೈಸೂರು (02/ನವೆಂಬರ್/2024)
ಮಾಹಿತಿ ಮೂಲ:
೧. ಕಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸೌಥ್ ಇಂಡಿಯಾ, Vol-VII, 1909.
೨. ಹೆಗ್ಗಡೆ ದೇವನಕೋಟೆ ತಾಲ್ಲೂಕು ಗೆಜೆ಼ಟಿಯರ್
೩. ಹಿರಿಯ ವಕ್ತೃಗಳು ಸಾಧರ ಪಡಿಸಿದ ಕುಲಮೂಲ ಕಥನ
08/09/2024
#ಹವ್ಯಕ_ಬ್ರಾಹ್ಮಣರು ಮತ್ತು #ಬೇಡರ_ದೊರೆ_ಮಯೂರವರ್ಮನು"
(ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕಾನನರು ತಮ್ಮ ಪ್ರವಾಸಕಥನ "The Journey from Madaras through the Countries of Mysore, Cañara and Malabar, ca.,1807” ಕೃತಿಯಲ್ಲಿ ದಾಖಲಿಸಿದ್ದು)
“…ಹಿರೇಗುತ್ತಿಯಲ್ಲಿ, ನಾನು ಹಲವಾರು ಹೈಗೆಯ (ಹವ್ಯಕ) ಬ್ರಾಹ್ಮಣರನ್ನು ಸಂದರ್ಶಿಸಲು ಸಾಧ್ಯವಾಯಿತು. ಅವರು ಈ ದೇಶದ ಇತಿಹಾಸದ ಬಗ್ಗೆ ಉತ್ತಮ ತಿಳುವಳಿಕೆಯುಳ್ಳವರು ಎಂದು ಹೇಳಲಾಗುತ್ತದೆ.
ಶಾನುಬೋಗ ಅಥವಾ ಧಾರೇಶ್ವರ ದೇವಾಲಯದ ಲೆಕ್ಕಿಗನು 'ಶುಭಾಹಿತಾ'ನೆನ್ನುವ ಬ್ರಾಹ್ಮಣ ಮುಖಂಡನೋರ್ವ ಬರೆದಿರುವ ‘ಬಾಹುದಂಡ’ ಎಂಬ ಪುಸ್ತಕವನ್ನು ನನಗೆ ಸಲ್ಲಿಸಿದನು. ಅಧಿಕಾರಯುತವಾದ ಈ ಪುಸ್ತಕದ ಆಧಾರದ ಮೇಲೆ ಆ ಶಾನಬೋಗನು ಹೇಳಿದ್ದು;
ಪರಶುರಾಮನು ತುಳುವ ಮತ್ತು ಮಲೆಯಾಳಗಳನ್ನು ರಚಿಸುವ ಸಮಯದಲ್ಲಿಯೇ ಈ ಹೈಗ ದೇಶವನ್ನು ರಚಿಸಿದನು. ಮತ್ತು ಈ ದೇಶಗಳಲ್ಲಿ ಕೆಲ ಬ್ರಾಹ್ಮಣರನ್ನು ಸಹ ನೆಲೆಗೊಳಿಸಿದರು. ಮಿತ್ತು ಬ್ರಾಹ್ಮಣರಿಗೆ ತುಳವ ದೇಶವನ್ನು ಹಾಗೂ ನಾಯರ (ನಾಗರ) ಮತ್ತು ಮಚ್ಚಿ ಬ್ರಾಹ್ಮಣರಿಗೆ ಹೈಗ ದೇಶವನ್ನು ನೀಡಿದರು. ಈ ಜನರು ಪರಿಶುದ್ಧ ಬ್ರಾಹ್ಮಣರಾಗಿರಲಿಲ್ಲ; ಆದರೂ ಕಲಿಯುಗದ ಆರಂಭದವರೆಗೆ ಹೈಗ ದೇಶವು ಈ ಜನರ ಸ್ವಾಧೀನದಲ್ಲಿಯೇ ಇತ್ತು.
ನಂತರ ಈ ದೇಶವನ್ನು ಅಶುದ್ಧರಾದ ಮೊಗೆಯರ್ (ಮೊಗವೀರರು) ಹಾಗೂ ವ಼ಲ್ಲಿಯಾರ್ (ಹೊಲಯರು) ಎಂಬ ಎರಡು ವರ್ಗಗಳ ಜನರು ವಶಪಡಿಸಿಕೊಂಡರು. ಮೊಗವೀರರು ಹೈಗಾದ ಮೀನುಗಾರ ಕುಲದವರು; ಆಗಿನ ರಾಜ ಎರಡನೇ ಬುಡಕಟ್ಟಿಗೆ ಸೇರಿದ್ದನು (ಅಶುದ್ಧರಾದ ಮಿತ್ತು ಹಾಗೂ ನಾಗರ ಮತ್ತು ಮಚ್ಚಿ ಬ್ರಾಹ್ಮಣರು ಈ ಮೂಲದವರು. ಪರಶುರಾಮನು ಇವರ ಮೀನಿನ ಬಲೆಯಿಂದ ಜನಿವಾರ ಮಾಡಿ ಇವರನ್ನು ದ್ವಿಜರನ್ನಾಗಿಸಿದ್ದನು. ಆದರೆ ಮುಂದೆ ಇವರು ಪರಶುರಾಮನ ಕ್ರೋಧಕ್ಕೆ ಈಡಾಗಿ ಬ್ರಾಹ್ಮಣತ್ವ ಕಳೆದುಕೊಂಡರು).
ದೀರ್ಘಕಾಲದ ನಂತರ ಈ ದೇಶಕ್ಕೆ ಭೇಟಿ ನೀಡಿದ ಓರ್ವ ಸನ್ಯಾಸಿಯು, ಇಲ್ಲಿನ ಪರಿಸ್ಥಿತಿಯನ್ನು ಕಂಡು ಮಯೂರವರ್ಮನಿಗೆ ಆಹ್ವಾನವಿತ್ತನು. ಕರ್ನಾಟಕ ದೇಶದ ಬನವಾಸಿ ಹಾಗೂ ಗುತ್ತಿ ಪ್ರಾಂತ್ಯಗಳ ರಾಜನಾದ ಮಯೂರವರ್ಮನು ತೆಲಂಗಾಣ (ತೆಲುಗು ದೇಶ) ಮೂಲದ ಬೇಡರ ಕುಲದವನಾಗಿದ್ದನು. ಅವನ ಆಕ್ರಮಣವು ಅತ್ಯಂತ ಯಶಸ್ವಿಯಾಯಿತು. ಅವನು ಹೈಗ, ತುಳವ ಮತ್ತು ಕೊಂಕಣವನ್ನು ವಶಪಡಿಸಿಕೊಂಡನು.
ನಂತರ ಮಯೂರನು ತೆಲಂಗಾಣದ ಒಂದು ನಗರವಾದ ಅಹಿಚ್ಛತ್ರದಿಂದ ಐದು ಸಾವಿರ ನೈಜ ಬ್ರಾಹ್ಮಣರನ್ನು ಕರೆತಂದು ಹೈಗಾ ದೇಶದಲ್ಲಿ ನೆಲೆಗೊಳಿಸಿದನು. ಅದೇ ಮೂಲದ ಮತ್ತಷ್ಟು ಬ್ರಾಹ್ಮಣರನ್ನು ಕರೆತಂದು ಕೊಂಕಣ ಹಾಗೂ ತುಳುವ ದೇಶಗಳಲ್ಲಿ ನೆಲೆಗೊಳಿಸಿದನು.
ಈ ಜನರಲ್ಲಿ ಸುಮಾರು ಒಂದು ಸಾವಿರ ಮಂದಿ ಹೊಸ ಸ್ಥಳದ ಶುದ್ಧೀಕರಣಕ್ಕೆ ಅಗತ್ಯವಾಗಿದ್ದ ಮಂತ್ರೋಚ್ಛಾರಣೆಯನ್ನು ಮರೆತಲಾಗಿ, ತಕ್ಷಣವೇ ತಮ್ಮ ಜಾತಿಯನ್ನು ಕಳೆದುಕೊಂಡರು. ಉಳಿದ ನಾಲ್ಕು ಸಾವಿರ ಜನರಿಗೆ ಹೈಗ ದೇಶವು ಹಂಚಿಕೆಯಾಯಿತು."
(1799 ರಲ್ಲಿ ಟಿಪ್ಪು ಸುಲ್ತಾನನ ಮರಣದ ನಂತರ ಮೈಸೂರು ಸಾಮ್ರಾಜ್ಯ ಪತನವಾಗಲಾಗಿ ಆಡಳಿತ ಚುಕ್ಕಾಣಿ ಹಿಡಿದ ಬ್ರಿಟಿಷರು ದಕ್ಷಿಣ ಭಾರತವನ್ನು ಸಮೀಕ್ಷೆ ಮಾಡಲು ಫ್ರಾನ್ಸಿಸ್ ಬುಕಾನಾನ್‍ರನ್ನು ಕೇಳಿಕೊಂಡರು. ಇದರ ಪರಿಣಾಮವಾಗಿ ದಕ್ಷಿಣ ಭಾರತದಾದ್ಯಂತ ಸಂಚರಿಸಿದ ಬುಕಾನಾನರ ಪ್ರವಾಸಿ ಕಥನವೇ "The Journey from Madaras through the Countries of Mysore, Cañara and Malabar, ca.,1807” ಕೃತಿಯಾಗಿದೆ.)
(ಪುಸ್ತಕ ಮಾಹಿತಿ: https://x.com/knayakas?s=21 ಕರ್ನಾಟಕ ನಾಯಕರು ಟ್ವಿಟರ್ ಪುಟ)
- ಪಾಳೇಗಾರ್ ದೀಪಕ್, ಮೈಸೂರು (08/Spe/2024)
30/03/2023
ಈ ದಿನ ಚಾಮರಾಜನಗರ ಪಟ್ಟಣದ ಮಾರಿಚಾವಡಿಯ ಬಳಿ ಆಯೋಜಿಸಿದ್ದ ಶ್ರೀರಾಮನವಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪ್ರಭು ಶ್ರೀರಾಮರ ಅನುಗ್ರಹ ಬೇಡಲಾಯಿತು. ಈ ಪವಿತ್ರ ರಾಮನವಮಿಯ ದಿನದಂದು, ಸರ್ವರಿಗೂ ಆ ಭಗವಂತನ ಆಶೀರ್ವಾದ ಲಭಿಸಲಿ ಎಂದು ಪ್ರಾರ್ಥಿಸುವೆನು.
- ಪಾಳೇಗಾರ್ ದೀಪಕ್, ಮೈಸೂರು.
22/01/2023
"ಕರ್ನಾಟಕ ದೇಶ ಹಾಗೂ ದಕ್ಷಿಣ ಭಾರತದ ಬೇಡರ ಸಂಸ್ಥಾನಗಳು".
ಈ ಬೇಡರ ಸಂಸ್ಥಾನಿಕರಲ್ಲಿ ಬುಡಕಟ್ಟು, ಜಾನಪದ, ವೈದಿಕ, ಲಿಂಗಾಯತ ಹಾಗೂ ಜೈನ ಮತಾನುಯಾಯಿಗಳೆಲ್ಲರೂ ಇರುವರು.
ಮಾಹಿತಿ ಮೂಲ:
೧) ಎಪ್ಪತ್ತೇಳು ಪಾಳೆಯಗಾರರು, ಪ್ರೊ.ಲಕ್ಷ್ಮಣ್ ತೆಲಗಾವಿ.
೨) ಪಾಳೇಗಾರ್ ದೀಪಕ್ ಮೈಸೂರು
ಕಲೆ: Pradeep Nayaka V
18/07/2021
ಶ್ರೀ ಮಚ್ಚಾಮುಂಡಿಕಾಂಬಾ ಚರಣಸರಸಿಜದ್ವಂಧ್ವ ಸೇವಾಧುರೀಣ ಸಮಸ್ತ ಭೂಮಂಡಲ ಮಂಡನಾಯಮಾನ ನಿಖಿಲದೇಶಾವತಂಸ ಕರ್ಣಾಟಕ ಜನಪದ ಸಂಪದಧಿಷ್ಠಾನಭೂತ ಶ್ರೀಮನ್ಮಹೀಶೂರ ಮಹಾಸಂಸ್ಥಾನ ಮಧ್ಯ ದೇದೀಪ್ಯಮಾನ ನಿಖಿಲ ಕಳಾನಿಧಿ ಕುಲಕ್ರಮಾಗತ ರಾಜಕ್ಷಿತಿಪಾಲ ಪ್ರಮುಖ ನಿಖಿಲ ರಾಜಾಧಿರಾಜ ಮಹಾರಾಜ ಚಕ್ರವರ್ತಿ ಮಂಡಲಾನುಭೂತ ದಿವ್ಯರತ್ನಸಿಂಹಾಸನಾರೂಢ ಶ್ರೀಮದ್ರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪ ಅಪ್ರತಿಮವೀರ ನರಪತಿ ಬಿರುದೆಂತೆಂಬರಗಂಡ ಲೋಕೈಕವೀರ ಯದುಕುಲ ಪಯಃಪರಾವಾರ ಕಳಾನಿಧಿ ಶಂಖಚಕ್ರಾಂಕುಶ ಕುಠಾರ ಮಕರ ಮತ್ಸ್ಯ ಶರಭ ಸಾಳ್ವ ಗಂಡಭೇರುಂಡ ಧರಣೀವರಾಹ ಹನುಮದ್ಗರುಡ ಕಂಠೀರವಾದ್ಯನೇಕ ಬಿರುದಾಂಕಿತರಾದ ಕರ್ಣಾಟಕ ಸಿಂಹಾಸನಾಧೀಶ್ವರ
ಶ್ರೀಮನ್ ಮಹಾರಾಜ ಜಯಚಾಮರಾಜ ಒಡೆಯರವರ 102 ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ.
Remembering H.H Dr. Jayachamaraja Wadiyar, Maharaja of Mysore on occasion of his birth anniversary.
23/05/2021
ಈ ದಿನ ಸುವರ್ಣಮಾರ (ಪೆರುಂಬೆಡಗ ಮುತ್ತುರಾಯ)ರ ಜಯಂತಿಯಂದು ಅವರಿಗೆ ನಮ್ಮ ಅನಂತಾನಂತ ನಮನಗಳು. ಕ್ರಿ.ಶ. 705-745 ರ ಅವಧಿಯಲ್ಲಿ ತಂಜಾವೂರನ್ನು ರಾಜಧಾನಿ ಮಾಡಿಕೊಂಡು ಮಧ್ಯ ತಮಿಳುನಾಡನ್ನು ಆಳಿದ ಇವರು; ಪ್ರಾಚೀನ ನಿಷಾದ-ನಾಯಕ ಪರಂಪರೆಯ ಶಾಖೆಯಾದ ಮುತ್ತುರಾಯ ಕುಲದವರು. ಮುತ್ತುರಾಯರು ಮೂಲತಃ ಕ್ರಿ.ಶ.3-4ನೇ ಶತಮಾನದಲ್ಲಿ ಮೈಸೂರು ಸೀಮೆಯಿಂದ ಉತ್ತರ ತಮಿಳುನಾಡಿಗೆ ವಲಸೆ ಹೋದವರಾಗಿದ್ದು; ತಲಕಾಡು ಗಂಗರಿಗೆ ದಾಯಾದಿಗಳು ಹಾಗೂ ಕಾರುಗಹಳ್ಳಿ ನಾಯಕ ಅರಸರಿಗೆ ಪೂರ್ವಿಕರು ಆಗಿರುವರು. ಈ ಸುವರ್ಣಮಾರ ಮುತ್ತುರಾಯನ ವಂಶಸ್ಥರೇ ಮುಂದೆ "ಚೋಳರು" ಎಂಬ ಹೆಸರಿನಲ್ಲಿ ಬೃಹತ್ ಸಾಮ್ರಾಜ್ಯ ಸ್ಥಾಪಿಸಿಕೊಂಡು, ದಕ್ಷಿಣ ಭಾರತ, ಶ್ರೀಲಂಕಾ ಸೇರಿದಂತೆ ಪೂರ್ವ ಏಷ್ಯಾ ದೇಶಗಳನ್ನೂ ಆಳಿದರು. ಎಲ್ಲಿಯೇ ಹೋದರು, ಇವರೆಲ್ಲರೂ ಸೂರ್ಯವಂಶ-ಇಕ್ಷ್ವಾಕು ಕುಲದವರೆಂದು ಗುರುತಿಸಿಕೊಳ್ಳುವ ಮೂಲಕ ಮೂಲ ಬೇರನ್ನು ಉಳಿಸಿಕೊಂಡರು.
ಪ್ರಕಟಣೆ: ಮೈಸೂರು ಪ್ರಾಂತ್ಯ ಕ್ಷತ್ರಿಯ ನಾಯಕ (ರಾಜಪರಿವಾರ) ಮಹಾಸಭಾ, ಮೈಸೂರು.
03/10/2020
ಭಾರತೀಯ ಸಂಸ್ಕೃತಿಗೆ ನಾಯಕ ಜನಾಂಗ ನೀಡಿದ ಎರಡು ಬಹುದೊಡ್ಡ ಕಾಣಿಕೆಗಳು ಮಹರ್ಷಿ ವಾಲ್ಮೀಕಿಯವರು ಮತ್ತು ಮಹರ್ಷಿ ವೇದವ್ಯಾಸರು. ಇವರುಗಳು ಬರೆದ ಮಹಾಕಾವ್ಯಗಳ ಆಧಾರದ ಮೇಲೆ, ಇಂದಿನ ಶ್ರೇಷ್ಠ ಹಿಂದೂ ಸಂಸ್ಕೃತಿ ಸ್ಥಾಪಿತವಾಗಿದೆ.
"ಹಂಪಿ ವಿ.ವಿ ಮಾದರಿಯಲ್ಲಿ ಮೈಸೂರು ವಿ.ವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ರಚನೆಯಾಗಬೇಕು" ಎಂಬುದು, ಮೈಸೂರು ನಾಯಕ ಜನಾಂಗದ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಮೈಸೂರು ವಿ.ವಿಯ ಮಾನ್ಯ ಕುಲಪತಿಗಳಾದ ಪ್ರೊ|| ಜಿ. ಹೇಮಂತ್‌ಕುಮಾರ್ ರವರು ನಾಯಕ ಜನಾಂಗಕ್ಕೆ ಕೊಡುಗೆ ಎಂಬಂತೆ ವಾಲ್ಮೀಕಿ ಮಹರ್ಷಿಗಳ ಪೀಠದ ಜೊತೆಗೆ ವ್ಯಾಸ ಮಹರ್ಷಿಗಳ ಪೀಠವನ್ನು ರಚಿಸುತ್ತಿರುವುದು ಅಭಿನಂದನಾರ್ಹ. ಅವರಿಗೆ ನಾವು ಈ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. 🙏💐
ನಿರ್ಲಕ್ಷಿಸಲ್ಪಟ್ಟಿರುವ, "ಮೈಸೂರು ನಾಯಕ ಜನಾಂಗದ ಭವ್ಯ ಇತಿಹಾಸ-ಪರಂಪರೆ" ಇನ್ನು ಮುಂದಾದರೂ ದಾಖಲೀಕರಣವಾಗಲಿ ಎಂದು ನಾವು ಆಶಿಸುತ್ತೇವೆ.
#ಆದಿಕವಿ_ಮಹರ್ಷಿ_ವಾಲ್ಮೀಕಿ
#ಆದಿಗುರು_ಮಹರ್ಷಿ_ವೇದವ್ಯಾಸ
ಪ್ರಕಟಣೆ: ಮೈಸೂರು ಪ್ರಾಂತ್ಯ ಕ್ಷತ್ರಿಯ ನಾಯಕ ಮಹಾಸಭಾ, ಮೈಸೂರು - (MPKNM, Mysore).
ಮತ್ತು
ಪಾಳೇಗಾರ್ ಮಾರನಾಯಕ ಯುವ ಬ್ರಿಗೇಡ್, ಮೈಸೂರು - (PMYB, Mysore).